ಕನ್ನಡ ಮತ್ತು
ಉರ್ದು ಭಾಷೆಗಳ ನಡುವೆ ಯಾವುದೇ ಬಗೆಯ ವಾಂಶಿಕ ಸಂಬಂಧವೂ ಇಲ್ಲ. ಭಾರತದ ದಕ್ಷಿಣ-ಮಧ್ಯ ಭಾಗದಲ್ಲಿ ಜನ್ಮ
ತಳೆದ ಉರ್ದುವನ್ನು ‘ದಖನಿ’ ಎಮದೂ ಕರೆಯುತ್ತಿದ್ದರು.
‘ದಖನಿ’ ಎಂಬ ಪದದ ಅರ್ಥವೇ
‘ದಾಕ್ಷಿಣಾತ್ಯ’ ಎಂದು. ಆದರೆ, ಈಗ ಆ ಭಾಷೆಯು
ದೇಶದ ಎಲ್ಲ ಭಾಗಗಳಲ್ಲಿಯೂ ಪ್ರಚಲಿತವಾಗಿದೆ. ಅಷ್ಟೇ ಅಲ್ಲ, ಅನೇಕ ಹೊರ ದೇಶಗಳಲ್ಲಿಯೂ ಅದನ್ನು ಬಳಸುವ
ಜನಸಮುದಾಯಗಳಿವೆ. ಪಾಕೀಸ್ತಾನದಲ್ಲಂತೂ ಅದೇ ರಾಜ್ಯಭಾಷೆ. ಅದು ಪರ್ಶಿಯನ್ ಮತ್ತು ಅರಾಬಿಕ್ ಭಾಷೆಗಳಿಂದ
ಅನೇಕ ಅಂಶಗಳನ್ನು ಅಳವಡಿಸಿಕೊಂಡಿದೆ. ‘ಕನ್ನಡ ಮತ್ತು ಪರ್ಸೋ ಅರಾಬಿಕ್’ಗಳ ನಡುವಿನ ಸಂಬಂಧಗಳನ್ನು ಬೇರೊಂದು
ನಮೂದಿನಲ್ಲಿ ಪರಿಶೀಲಿಸಲಾಗಿದೆ. ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ, ಉರ್ದುಭಾಷಿಕರ ಸಮುದಾಯಗಳು ಸಾಕಷ್ಟು
ಸಂಖ್ಯೆಯಲ್ಲಿವೆ. ಅವರಲ್ಲಿ ಬಹುಪಾಲು ಜನರು ಮುಸ್ಲಿಮರಾದರೂ ಹೈದರಾಬಾದು ಕರ್ನಾಟಕದ ಹಲವು ಪ್ರದೇಶಗಳಲ್ಲಿ
ಉರ್ದುವನ್ನು ಚೆನ್ನಾಗಿ ಬಲ್ಲ ಹಿಂದೂಗಳೂ ಇದ್ದಾರೆ. ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿಯೂ ಅನೇಕ ಉರ್ದುಭಾಷಿಕರಿದ್ದಾರೆ.
ಹೆಚ್ಚು ಕಡಿಮೆ ಎಲ್ಲ ಉರ್ದುಭಾಷಿಕರೂ ಕನ್ನಡವನ್ನು ಮಾತನಾಡಬಲ್ಲರು. ಅಕ್ಷರಸ್ಥರಾದವರು ಕನ್ನಡದ ಓದು-ಬರಹಗಳನ್ನೂ
ಬಲ್ಲರು. ಹಳೆಯ ಮೈಸೂರು ಮತ್ತು ಉತ್ತರ ಕರ್ನಾಟಕ ಪ್ರದೇಶಗಳ ಮುಸ್ಲಿಮರ ಮನೆಮಾತು ಉರ್ದು. ಅವರೆಲ್ಲರೂ
ಹೊರಗಿನ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸುತ್ತಾರೆ.
ಕರಾವಳಿ ಕರ್ನಾಟಕದ ಅನೇಕ ಮುಸ್ಲಿಮರು ತಮ್ಮ ಅಗತ್ಯಗಳಿಗೆ
ಅನುಗುಣವಾಗಿ, ತುಳು ಅಥವಾ ಮಲಯಾಳಂ ಭಾಷೆಗಳನ್ನೂ ಮಾತನಾಡಬಲ್ಲರು. ಈ ಪ್ರದೇಶದಲ್ಲಿ ಹಲವರ ತಾಯಿನುಡಿಯು
ಬ್ಯಾರಿ ಭಾಷೆ. ಕರ್ನಾಟಕ ರಾಜ್ಯ ಸರ್ಕಾರವು, ಎಲ್ಲ ಕಡೆಯಲ್ಲಿಯೂ ನಡೆಸುತ್ತಿರುವ ಉರ್ದು ಮಾಧ್ಯಮದ
ಶಾಲೆಗಳು ಮತ್ತು ಮದ್ರಸಾಗಳು ಆ ಭಾಷೆಯ ಕಲಿಕೆಗೆ ಅವಕಾಶ ಮಾಡಿಕೊಟ್ಟಿವೆ. ಈ ಶಾಲೆಗಳಲ್ಲಿ ಹೆಚ್ಚಾಗಿ
ಕಲಿಯುವವರು ಹೆಣ್ಣುಮಕ್ಕಳು. ಹುಡುಗರು ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಆರಿಸಿಕೊಳ್ಳುತ್ತಾರೆ.
ಕನ್ನಡ ಸಾಹಿತ್ಯದ ಬೆಳವಣಿಗೆಗೆ ಅನೇಕ ಮುಸ್ಲಿಂ ಲೇಖಕರು ತಮ್ಮದೇ ಆದ ಕಾಣಿಕೆಯನ್ನು ಸಲ್ಲಿಸಿದ್ದಾರೆ.
ಐತಿಹಾಸಿಕವಾಗಿ ನೋಡಿದರೆ, ಅನೇಕ ಮುಸ್ಲಿಂ ರಾಜವಂಶಗಳು ಕರ್ನಾಟಕದ
ವಿಭಿನ್ನ ಭಾಗಗಳಲ್ಲಿ ಆಡಳಿತ ನಡೆಸಿದ್ದರು. ಈ ಸಂಗತಿಯು ಸಂಸ್ಕೃತಿಗಳ ನಡುವಿನ ಆರೋಗ್ಯಕರವಾದ ಕೊಳುಕೊಡೆಗೆ
ಕಾರಣವಾಗಿದೆ. ಕರ್ನಾಟಕದ ಕಲೆಗಳು ಮತ್ತು ವಾಸ್ತುಶಿಲ್ಪವು ಇಸ್ಲಾಮಿಕ್ ಪ್ರಭಾವಗಳಿಂದ ಬಹಳ ಪ್ರಯೋಜನವನ್ನು
ಪಡೆದಿವೆ. ಮುಸ್ಲಿಂ ಆಕ್ರಮಣಕಾರರಿಗೂ ಮುಸ್ಲಿಂ ರಾಜರಿಗೂ ಮಹತ್ವದ ವ್ಯತ್ಯಾಸಗಳಿವೆ. ಉತ್ತರ ಭಾಗದಲ್ಲಿ
ಬಹಮನಿ. ಅದಿಲ್ ಶಾಹಿ, ಆಶಫ್ ಜಾಹಿ ಮತ್ತು ಬರೀದ್ ಶಾಹಿ ರಾಜವಂಶಗಳು ಅಂತೆಯೇ ಹಳೆಯ ಮೈಸೂರಿನಲ್ಲಿ
ಹೈದರಾಲಿ ಮತ್ತು ಟೀಪು ಸುಲ್ತಾನರ ಆಳ್ವಿಕೆಗಳು ಈ ಮಾತಿಗೆ ನಿದರ್ಶನಗಳು. ಇವಲ್ಲದೆ ಅನೇಕ ಮುಸ್ಲಿಂ
ಪಾಳೆಯಗಾರರು ಮತ್ತು ಸಾಮಂತರಾಜರು ತಮ್ಮದೇ ಆದ ಪ್ರಭಾವವಲಯಗಳನ್ನು ಹೊಂದಿದ್ದರು.
ಉರ್ದು ಮತ್ತು ಕನ್ನಡ ಭಾಷೆಗಳ ಬೇರೆ ಬೇರೆ ನೆಲೆಗಳಲ್ಲಿ ಪರಸ್ಪರ
ಸಂಬಂಧಗಳು ಏರ್ಪಟ್ಟಿವೆ. ರಾಜ್ಯವ್ಯವಸ್ಥೆಯು ಬಳಸುವ ಅನೇಕ ಆಡಳಿತಾತ್ಮಕ ಮತ್ತು ವೃತ್ತಿಸಂಬಂಧಿಯಾದ
ಪದಗಳು ಉರ್ದು ಭಾಷೆಯಿಂದ ಕನ್ನಡಕ್ಕೆ ಬಂದಿವೆ. ಹೀಗೆಂದರೆ, ಎಲ್ಲ ದಾಖಲೆಗಳನ್ನೂ ಎಲ್ಲ ಕಡೆಯೂ ಉರ್ದುವಿನಲ್ಲೇ
ಇಡುತ್ತಿದ್ದರೆಂದು ಅರ್ಥವಲ್ಲ. ಆದರೆ, ಉತ್ತರ ಭಾರತದಲ್ಲಿ ಬಳಸುತ್ತಿದ್ದ ಆಡಳಿತದ ಮಾದರಿಗಳ ನಿಕಟ
ಪರಿಚಯವಿದ್ದ ಅಧಿಕಾರಿಗಳು ಅಲ್ಲಿಂದ ಕಡ ತಂದ ಪರ್ಸೋ-ಅರಾಬಿಕ್ ಮತ್ತು ಉರ್ದು ಪದಗಳನ್ನು ಬಳಸಲು ಹಿಂಜರಿಯಲಿಲ್ಲ.
ಅಂತೆಯೇ ವೈದ್ಯಕೀಯ, ಯುದ್ಧಕಲೆ ಮತ್ತು ಜೀವನೋಪಯೋಗಿಯಾದ ಕಲೆಗಳಿಗೆ ಸಂಬಂಧಪಟ್ಟ ಅನೇಕ ಪಾರಿಭಾಷಿಕ
ಪದಗಳು ಮೇಲೆ ಹೇಳಿದ ಭಾಷಾಮೂಲಗಳಿಂದ ಕನ್ನಡದೊಳಗೆ ಪ್ರವೇಶ ಪಡೆದು ಸಹಜವಾಗಿಯೇ ಬಳಕೆಯಲ್ಲಿವೆ. ಈ ಪದಗಳನ್ನು
ಜನಸಾಮಾನ್ಯರೂ ಕೂಡ ಯಾವುದೇ ತೊಂದರೆಯೂ ಇಲ್ಲದೆ ಬಳಸುತ್ತಾರೆ. ಅದೇ ಮಾತುಗಳನ್ನು ಸಂಸ್ಕೃತ ಪಾರಿಭಾಷಿಕಗಳ
ಬಗ್ಗೆ ಹೇಳುವುದು ಕಷ್ಟ. ಯಾವುದೇ ಭಾಷೆಯ ಸಾಂಸ್ಕೃತಿಕ ಪದಕೋಶವು ಇಂತಹ ಪ್ರಕ್ರಿಯೆಗಳಿಂದ ಶ್ರೀಮಂತವಾಗುತ್ತದೆ.
ಉರ್ದುವು, ಅನೇಕ ಕಡೆ ಆಸ್ಥಾನಭಾಷೆಯೂ ಆದುದರಿಂದ ಸಾಕಷ್ಟು ತೀವ್ರವಾದ ಪ್ರಭಾವವನ್ನೇ ಬೀರಿದೆ. ಈ ಪ್ರಭಾವವನ್ನು
ಬಿಜಾಪುರ, ಗುಲ್ಬರ್ಗ, ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ಹೆಚ್ಚಾಗಿ ಗುರುತಿಸಬಹುದು. ಇವುಗಳಲ್ಲಿ
ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಜಿಲ್ಲೆಗಳಲ್ಲಂತೂ ಉರ್ದುವು ಶಿಕ್ಷಣ ಮಾಧ್ಯಮವೂ ಆಗಿತ್ತು. ಇಂತಹ
ಕಡೆ, ಎಷ್ಟೋ ಕಾಲದವರೆಗೆ ಕನ್ನಡಕ್ಕೆ ಮೊದಲನೆಯ ಮಣೆ ಸಿಕ್ಕಿರಲಿಲ್ಲ.
ಮುಸ್ಲಿಮರು ಮಾತನಾಡುವ ಕನ್ನಡವು, ಹೆಚ್ಚುಕಡಿಮೆ ಒಂದು ಸಾಮಾಜಿಕ
ಉಪಭಾಷೆಯ ರೂಪವನ್ನೇ ಪಡೆದಿದೆ. ಅದನ್ನು ಬಳಸುವವರು ಕನ್ನಡವನ್ನು ತಮ್ಮ ತಾಯಿನುಡಿಯ ಸ್ವರೂಪಕ್ಕೆ ಅನುಗುಣವಾಗಿ
ಬದಲಾಯಿಸಿಕೊಂಡು ಉಚ್ಚರಿಸುತ್ತಾರೆ. ಹೀಗೆ ಆಗುವುದನ್ನು ಭಾಷಾಶಾಸ್ತ್ರಜ್ಞರು ಫಿಲ್ಟರಿಂಗ್ ಎಂದು ಕರೆಯುತ್ತಾರೆ.
ಇಂತಹ ಬದಲಾವಣೆಗಳು ಧ್ವನಿರಚನೆ, ಪದರಚನೆ, ವಾಕ್ಯರಚನೆ ಮತ್ತು ಪದಕೋಶಗಳೆಂಬ ನಾಲ್ಕು ನೆಲೆಗಳಲ್ಲಿಯೂ
ನಡೆದಿದೆ. ಅಷ್ಟೇ ಅಲ್ಲ, ಕಾಕು, ಧ್ವನಿಗಳ ಏರಿಳಿತ ಮುಂತಾದ ವಾಕ್ಯೋತ್ತರ ಘಟಕಗಳೂ ಅನೇಕ ಬದಲಾವಣೆಗಳನ್ನು
ಕಂಡಿವೆ. ಆದರೆ, ಇವು ಪರಸ್ಪರ ಸಂವಹನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ.
ಕರ್ನಾಟಕದ ಸೂಫಿ ಸಂತರು, ಆಸ್ಥಾನ ಕವಿಗಳು ಮತ್ತು ವಿದ್ವಾಂಸರು
ಅನೇಕ ಸಾಹಿತ್ಯಕೃತಿಗಳು ಮತ್ತು ಜ್ಞಾನಸಂಬಂಧಿಯಾದ ಹೊತ್ತಿಗೆಗಳನ್ನು ಉರ್ದುವಿನಲ್ಲಿಯೂ ಬರೆದಿದ್ದಾರೆ.
ಅನೇಕ ರಾಜರೂ ಈ ರೀತಿಯ ಪುಸ್ತಕಗಳನ್ನು ಬರೆದಿದ್ದಾರೆ.
ಮುಂದಿನ ಓದು ಮತ್ತು ಲಿಂಕುಗಳು: